ಕೊಡಗಿನ ಜನರ ಮೇಲೆ ಪ್ರಕೃತಿ ಮಾತೆ ಮತ್ತೆ ಮುನಿಸಿಕೊಂಡಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ಮಳೆಯೇನೋ ಕಡಿಮೆ ಆಗಿದೆ. ಆದ್ರೆ 2018ರ ಮಾದರಿಯ ವಿಕೋಪಗಳು ಮರುಕಳಿಸಲು ಆರಂಭವಾಗಿದೆ. ತಡರಾತ್ರಿ ಭಾರೀ ಶಬ್ಧದೊಂದಿಗೆ ರಾಮಕೊಲ್ಲಿಯಲ್ಲಿ ಜಲಸ್ಫೋಟವಾಗಿದೆ. ಬೆಟ್ಟದಿಂದ ಭಾರಿ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ಹರಿದುಬಂದಿದೆ. ರಾಮಕೊಲ್ಲಿಯಿಂದ ಸುಮಾರು ಮೂರ್ನಾಲ್ಕು ಕಿಲೋ ಮೀಟರ್ ದೂರದಿಂದ ಈ ಒಂದು ಗುಡ್ಡ ಕುಸಿತವಾಗಿ ಈ ಮಣ್ಣು ಬಂದಿದೆ. ನೂರಾರು ಮರಗಳು ಈ ನೀರಿನ ಜೊತೆ ಕೊಚ್ಚಿ ಬಂದಿವೆ. ಗುಡ್ಡ ಜರಿದ ಪರಿಣಾಮ ಭಾರಿ ಪ್ರಮಾಣದ ಮಣ್ಣು ಹಾಗೂ ಮರದ ದಿಮ್ಮಿಗಳು ರಾಮಕೊಲಿಯ ಸೇತುವೆಗೆ ಬಂದು ಶೇಖರಣೆಗೊಂಡಿದೆ. ಇಲ್ಲಿ ವಾಸವಿರೋ 25ಕ್ಕೂ ಹೆಚ್ಚು ಕುಟುಂಬಗಳಲ್ಲಿ ಈಗ ಭೀತಿ ಮನೆ ಮಾಡಿದೆ. 2018ರಲ್ಲಿ ಕುಸಿತ ಉಂಟಾದ ಪ್ರದೇಶದಲ್ಲೇ ಈ ಅನಾಹುತ ಸಂಭವಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯರಲ್ಲಿ ಧೈರ್ಯ ತುಂಬಿದ್ದಾರೆ. ಇನ್ನು, ಕಡ್ಯದಲ್ಲೂ ಜಲಸ್ಫೋಟ ಆಗಿದೆ. ಭಾರೀ ಕೆಸರಿನೊಂದಿಗೆ ದೊಡ್ಡ ದೊಡ್ಡ ಕಲ್ಲು ಬಂಡೆಗಳು, ನೂರಾರು ಮರಗಳು ಕೊಚ್ಚಿ ಹೋಗಿವೆ. ಸ್ಥಳದಲ್ಲಿ ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ರಾತ್ರೋರಾತ್ರಿ ಕಡ್ಯದಲ್ಲಿ ವಾಸವಿದ್ದ ಎಂಟು ಕುಟುಂಬಗಳನ್ನು ಪಿಡಿಓ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಿದ್ದಾರೆ.
#publictv #bigbulletin #hrranganath